ಡೆಲ್ಫಿ
ಪ್ರಾಚೀನ ಕಾಲದಿಂದಲೂ ಗ್ರೀಕರ ಧಾರ್ಮಿಕ ಸಾಮಾಜಿಕ ಜೀವನಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದ್ದು ಅವರ ಮತೀಯ ಕೇಂದ್ರವಾಗಿದ್ದ ನಗರ. ಗ್ರೀಸ್ ದೇಶದ ಮಧ್ಯಭಾಗದಲ್ಲಿರುವ ಫೋಸಿಸ್ ಪ್ರಾಂತ್ಯದಲ್ಲಿ ಕಾರಿಂತ್ ಕೊಲ್ಲಿಯ ಮೇಲೆ ಪರ್ನಾಸಸ್ ಪರ್ವತ ಪ್ರದೇಶದಲ್ಲಿ ದಟ್ಟಕಾಡು ಮತ್ತು ಪರ್ವತ ಕಣಿವೆಗಳ ನಿಸರ್ಗಸೌಂದರ್ಯದ ರಾಶಿಯ ನಡುವೆ ಅಡಗಿರುವ ಡೆಲ್ಫಿ ಅಲ್ಲಿಯ ಜನತೆಯ ಭಾವುಕತೆಯ ನೆಲೆಯಾಗಿತ್ತು. ವಿಶ್ವದ ಕೇಂದ್ರ ಅಥವಾ ನಾಭಿಪ್ರದೇಶವನ್ನು ಕಂಡುಹಿಡಿಯಲು ಜó್ಯೂಸ್‍ದೇವತೆ ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಕಳಿಸಿದ ಎರಡು ಪಕ್ಷಿಗಳು ಡೆಲ್ಫಿಯ ಒಂಫಾಲಸ್ (ನಾಭಿ) ಶಿಲೆಯಿರುವ ಸ್ಥಳದಲ್ಲಿ ಸಂಧಿಸಿದುವೆಂದೂ ಆದ್ದರಿಂದ ಅದೇ ಪ್ರಪಂಚದ ಕೇಂದ್ರವೆಂದೂ ಗ್ರೀಕರು ನಂಬಿದ್ದರು. ಡೆಲ್ಫಿಸ್ ಪದಕ್ಕೆ ಗರ್ಭಾಶಯ ಅಥವಾ ನಾಭೀಪ್ರದೇಶ ಎಂದು ಅರ್ಥವಿದೆ.

	ಪ್ರಾಚೀನ ಕಾಲದಲ್ಲಿ ಒಲಂಪಿಯನ್ನರು ಬರುವ ಮೊದಲೇ ಇಲ್ಲಿ ಜ್ಯೂಸ್ ದೇವತೆಯ ಮಕ್ಕಳಾದ ಅಪಾಲೋ ಮತ್ತು ಅತೀನ ಅವರ ಗುಡಿಗಳ ನಿರ್ಮಾಣವಾಗಿತ್ತು. ಕ್ರಿ. ಪೂ. 2ನೆಯ ಸಹಸ್ರಮಾನದ ಮಧ್ಯಭಾಗಕ್ಕೆ ಸೇರಿದ ಮೈಸೀನಿಯನ್ ಸಂಸ್ಕøತಿಯ ಕಾಲಕ್ಕೆ ನಿರ್ದೇಶಿಸಬಹುದಾದ ವಸತಿಗಳ ಮತ್ತು ದೇವಾಲಯಗಳ ಅವಶೇಷಗಳು ಫ್ರೆಂಚ್ ಪ್ರಾಕ್ತನ ಶಾಸ್ತ್ರಜ್ಞರು ನಡೆಸಿದ ಉತ್ಖನನಗಳಲ್ಲಿ ದೊರಕಿವೆ. ಮೈಸಿನೆ ಸಂಸ್ಕøತಿಯಲ್ಲಿ ಪ್ರಾಮುಖ್ಯ ಗಳಿಸಿದ್ದ ಮಹಾಮಾತೃ ದೇವತೆಯ ಪೂಜಾ ಕುರುಹುಗಳೂ ಕಂಡುಬಂದಿದೆ. ಭವಿಷ್ಯ ನುಡಿಯುವ ಡೆಲ್ಫಿಯ ದಿವ್ಯವಾಣಿಯನ್ನು ಕಾಯುವ ಮಹಾಸರ್ಪ ಅಲ್ಲಿ ವಾಸಿಸುತ್ತಿತ್ತು. ಡೆಲ್ಫಿಯಲ್ಲಿ ತನ್ನ ಮಹತ್ತ್ವವನ್ನು ಸ್ಥಾಪಿಸುವ ಸಲುವಾಗಿ ಆ ಸರ್ಪವನ್ನು ಕೊಂದ ಅಪಾಲೋ ಅಲ್ಲಿಯ ಮುಖ್ಯದೇವತೆಯಾದ. ಅವನ ಭವಿಷ್ಯವಾಣಿ ಫಿಥಿಯಾ ಎಂಬ ಭಕ್ತೆಯ ಮುಖಾಂತರ ನುಡಿಯುತ್ತಿತ್ತು. ನಾಲ್ಕು ವರ್ಷಗಳಿಗೊಮ್ಮೆ ಗ್ರೀಸಿನ ಎಲ್ಲ ಭಾಗಗಳಿಂದ ಬಂದ ಕ್ರೀಡಾಪಟುಗಳು ಪಿಥಿಯನ್ ಸಂಗೀತ ಮತ್ತು ಕ್ರೀಡಾಪಂದ್ಯಗಳಲ್ಲಿ ಭಾಗವಹಿಸುತ್ತಿದ್ದರು. ಭವಿಷ್ಯವಾಣಿ ಮತ್ತು ಕ್ರೀಡಾಪಂದ್ಯಗಳಿಂದ ಡೆಲ್ಫಿಯ ಅಪಾಲೋ ಜ್ಯೂಸ್ ದೇವತೆಯಂತೆ ದೇಶಾದ್ಯಂತ ಪೂಜಾರ್ಹನಾದ.

	ಆತೆನ್ಸಿನಿಂದ ಡೆಲ್ಫಿಗೆ ಬಂದ ಪ್ರವಾಸಿಗ ಮೊದಲು ಅತೆನಾ ಪ್ರೊನಾಯಿಯ ಗುಡಿಯನ್ನು ತಲುಪಿ ಅಲ್ಲಿದ್ದ ಥೊಲೊಸ್ ಶಿಲೆಯನ್ನು ಸಂದರ್ಶಿಸುತ್ತಿದ್ದ. ಅಲ್ಲಿಂದ ಮುಂದೆ ಪಿಥಿಯನ್ ಕ್ರೀಡಾಪಟುಗಳು ತರಬೇತು ಹೊಂದುತ್ತಿದ್ದ ವ್ಯಾಯಾಮ ಶಾಲೆ, ಪರ್ವತದಡಿಯಿಂದ ಬುಗ್ಗೆಯಾಗಿ ಹರಿಯುತ್ತಿದ್ದ ನೀರಿನಿಂದ ತುಂಬಿದ ಕೆಸ್ಟಾಲಿಯ ಕೊಳ ಮತ್ತು ಕೊನೆಗೆ ಆಪಾಲೋ ಮುಖ್ಯದೇವಾಲಯ ಇದ್ದುವು.  ಈ ಮಾರ್ಗದುದ್ದಕ್ಕೂ ಇಕ್ಕೆಲಗಳಲ್ಲೂ ದೇಶದ ವಿವಿಧ ಭಾಗಗಳಿಗೆ ಸೇರಿದ ಭಕ್ತರು. ರಾಜ ಶ್ರೀಮಂತ ವರ್ಗದವರು ಶಕ್ತಿಪೂರ್ವಕವಾಗಿ ಡೆಲ್ಫಿಯ ಅಧಿದೇವತೆಗೆ ಸಮರ್ಪಿಸಿದ ಅನೇಕ ಪ್ರತಿಮೆಗಳು, ಸುಂದರಸ್ತಂಭಗಳು, ಭಂಡಾರಗಳು, ವೇದಿಕೆಗಳು ಇದ್ದುವು. ಇವು ಉತ್ತಮ ಆಲಂಕಾರಿಕ ಕಲಾಕೃತಿಗಳಾಗಿದ್ದುವು. ಭಂಡಾರಗಳು ಗ್ರೀಸಿನ ವಿವಿಧ ರಾಜ್ಯಗಳು ತಮ್ಮ ಕಾಣಿಕೆಯಾಗಿ ಆ ಪವಿತ್ರಕ್ಷೇತ್ರದಲ್ಲಿ ನಿರ್ಮಿಸಿದ ಮಂಟಪ ಅಥವಾ ಪವಿತ್ರ ಕಟ್ಟಡಗಳು. ಭಂಡಾರಗಳಲ್ಲಿ ಅತ್ಯಂತ ಸುಂದರ ನಿರ್ಮಿತಿಯಾಗಿದ್ದ ಆತೆನ್ಸಿನ ಭಂಡಾರವನ್ನು ಈಚಿಗೆ ಪುನರ್ನಿರ್ಮಿಸಲಾಗಿದೆ. ಅಪಾಲೋ ಗುಡಿ ಕ್ರಿ. ಪೂ. 6ನೆಯ ಮತ್ತು ಕ್ರಿ. ಪೂ 4ನೆಯ ಶತಮಾನಗಳಲ್ಲಿ ಸಂಭವಿಸಿದ ಭೂಕಂಪಗಳಿಂದ ಹಾಳಾದರೂ ಅದನ್ನು ಹೆಚ್ಚು ಸುಂದರವಾಗಿ ಮತ್ತೆ ಕಟ್ಟಲಾಯಿತು. ಅದರ ನಿರ್ವಹಣೆಗಾಗಿ ನೆರೆಹೊರೆಯ ನಗರರಾಜ್ಯಗಳ ಪ್ರತಿನಿಧಿಗಳನ್ನೊಳಗೊಂಡಿದ್ದ ಅಂಫಿಕ್ಟಿಯೊನಿ ಎಂಬ ಸಂಸ್ಥೆ ಇತ್ತು. ಅಪಾಲೋ ತರುವಾಯ ಡೆಲ್ಫಿಯ ಪ್ರಮುಖ ದೇವತೆ ಡೈಯೊನೈಸಸ್, ಅಮರನಾದರೂ ಮೃತ್ಯುವಿಗೀಡಾಗಿ ಮರಳಿ ಬದುಕಿ ಬಂದ ಡೈಯೊನೈಸಸನ ಸಮಾಧಿ ಅಪಾಲೋನ ಗರ್ಭಗುಡಿಯ ಕೆಳಗಿದೆಯೆಂದು ನಂಬಲಾಗಿದೆ. ಆ ಸಮಾಧಿಕೊಠಡಿ ಅಥವಾ ಅಡೈಟಾನ್‍ನಲ್ಲಿ ಮುಕ್ಕಾಲಿನ ಆಸನದ ಮೇಲೆ ಪಿಥಿಯಾ ಕುಳಿತು, ಅಪಾಲೋನ ಭವಿಷ್ಯವಾಣಿಯನ್ನು ಜನಸಾಮಾನ್ಯರಿಗೆ ತಿಳಿಸುತ್ತಾಳೆಂದು ನಂಬಲಾಗಿತ್ತು. ಡೈಯೊನೈಸಸನ ಪ್ರೇತಶಕ್ತಿ ಪಿಥಿಯಾಳ ದೇಹ ಪ್ರವೇಶಿಸುವುದೇ ಭವಿಷ್ಯವಾಣಿಗೆ ಪ್ರೇರಕವೆಂದು ನಂಬಲಾಗಿತ್ತು. 

	ಸಾರ್ವಜನಿಕರೂ ರಾಜಕೀಯ ವ್ಯಕ್ತಿಗಳೂ ರಾಜಪ್ರತಿನಿಧಿಗಳೂ ಅಪಾಲೋ ದೇವತೆಗೆ ಕಾಣಿಕೆಗಳನ್ನು ಅರ್ಪಿಸಲು ಮತ್ತು ತಮ್ಮ ವೈಯಕ್ತಿಕ ಅಥವಾ ರಾಜ್ಯದ ಸಮಸ್ಯೆಗಳ ಬಗ್ಗೆ ದಿವ್ಯವಾಣಿಯಿಂದ ಸೂಕ್ತಸಲಹೆಗಳನ್ನು ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಡೆಲ್ಫಿಗೆ ಬರುತ್ತಿದ್ದರು. ಯುದ್ಧದ ಪ್ರಾರಂಭ, ಶಾಂತಿ ಸಂಧಾನ, ಹೊಸ ನಿರ್ಮಾಣಗಳ ಪ್ರಾರಂಭ ಮುಂತಾದ ಯಾವುದೇ ಪ್ರಮುಖ ಕಾರ್ಯದ ಆರಂಭವಾಗಬೇಕಿದ್ದರೂ ಗ್ರೀಕರು ತಮ್ಮ ನಾಡು ಅಥವಾ ವಸಾಹತುಗಳಿಂದ ಡೆಲ್ಫಿಗೆ ಬಂದು ದಿವ್ಯವಾಣಿಯ ಸಲಹೆ ಪಡೆದು ತರುವಾಯ ಮಾತ್ರ ಅಂಥ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರು. ಕ್ರಿ. ಪೂ. 8ನೆಯದರಿಂದ 6ನೆಯ ಶತಮಾನದ ವರೆಗೆ ಗ್ರೀಕರ ವಸಾಹತುಶಾಹಿಯ ಅಭಿವೃದ್ಧಿಯಲ್ಲಿ ಡೆಲ್ಫಿಯ ದಿವ್ಯವಾಣಿಯ ಪಾತ್ರ ಪ್ರಧಾನವಾಗಿತ್ತು. ವಸಾಹತುಗಾರರು ಹೊಸ ನಗರಗಳ ಸ್ಥಾಪನೆಗೆ ಅನುಸರಿಸಬೇಕಾದ ಕ್ರಮಗಳನ್ನೂ ಆಚರಿಸಬೇಕಾದ ವಿಧಿ ನಿಯಮಗಳನ್ನೂ ದಿವ್ಯವಾಣಿ ತಿಳಿಸುತ್ತಿದ್ದುದಲ್ಲದೆ ಭೌಗೋಳಿಕವಾಗಿ ಮಾರ್ಗದರ್ಶನವನ್ನೂ ಒದಗಿಸುತ್ತಿತ್ತು. ಡೆಲ್ಫಿಗೆ ವಿವಿಧ ಪ್ರದೇಶಗಳಿಂದ ಯಾತ್ರಿಕರು ಬರುತ್ತಿದ್ದುದರಿಂದ ಆ ಎಲ್ಲ ಪ್ರದೇಶಗಳ ಜನಜೀವನ, ಸಂಸ್ಕøತಿ ಮತ್ತು ಭೌಗೋಳಿಕ ಲಕ್ಷಣಗಳ ಪರಿಚಯ ಪಡೆದಿರುತ್ತಿದ್ದ ಮತ್ತು ಚತುರ್ವಾರ್ಷಿಕ ಪಿಥಿಯನ್ ಪಂದ್ಯಗಳಲ್ಲಿ ಭಾಗವಹಿಸಲು ಬರುತ್ತಿದ್ದ ಕ್ರೀಡಾಪಟುಗಳಿಂದ ಸುದ್ದಿ ಸಂಗ್ರಹಮಾಡಿಕೊಂಡಿರುತ್ತಿದ್ದ ಡೆಲ್ಫಿಯ ಪುರೋಹಿತವರ್ಗ ಇಂಥ ಸುದ್ದಿ ಸಲಹೆಗಳನ್ನು ಒದಗಿಸುತ್ತಿದ್ದುದರಲ್ಲಿ ಅಚ್ಚರಿ ಇಲ್ಲ.

	ಕ್ರಿ.ಪೂ. 6ನೆಯ ಶತಮಾನದಲ್ಲಿ ಡೆಲ್ಫಿ ಬಹಳ ಉಚ್ಛ್ರಾಯಸ್ಥಿತಿಯಲ್ಲಿತ್ತು. ಕ್ರಿ.ಪೂ. 480ರಲ್ಲಿ ಪರ್ಷಿಯನ್ ಆಕ್ರಮಣದ ಸಂದರ್ಭದಲ್ಲಿ ದಿವ್ಯವಾಣಿ ಗ್ರೀಕರಿಗೆ ನಿರಾಶಾದಾಯಕವೂ ಆಕ್ರಮಣಕಾರರಿಗೆ ಅನುಕೂಲಕರವೂ ಆಗಿತ್ತು. ಆದರೆ ಸ್ಯಾಲಮಿಸ್ ಮತ್ತು ಪಾಟ್ಲಿಯ ಕದನಗಳಲ್ಲಿ ಗ್ರೀಕರು ಅದ್ಭುತ ಜಯ ಗಳಿಸಿದ್ದರಿಂದ ದಿವ್ಯವಾಣಿಯ ಬಗ್ಗೆ ಗ್ರೀಕರಿಗಿದ್ದ ಗಾಢನಂಬಿಕೆಗೆ ಕೊಡಲಿ ಪೆಟ್ಟು ಬಿದ್ದಂತಾಯಿತು. ಪರ್ಷಿಯನ್ನ ಯುದ್ಧಗಳ ಅನಂತರ ರಾಜಕೀಯವಾಗಿ ಡೆಲ್ಫಿ ಆಳುವ ಮನೆತನದತ್ತ ಓಲುವಂತಾಯಿತು. ಇಷ್ಟಾದರೂ ಅಲೆಕ್ಸಾಂಡರನ ಕಾಲದವರೆಗೂ ಡೆಲ್ಫಿ ದೇವಾಲಯದ ಪ್ರಭಾವ ಉಳಿದುಬಂತು. ಕ್ರಿ.ಶ. 2ನೆಯ ಶತಮಾನದಲ್ಲಿ ಡೆಲ್ಫಿಯ ಪ್ರಭಾವ ಮತ್ತೊಮ್ಮೆ ಬೆಳೆಯಿತು. ಡೆಲ್ಫಿಯ ಪುರೋಹಿತವರ್ಗಕ್ಕೆ ಸೇರಿದ ಪ್ಲೂಟಾರ್ಕ್ ಡೆಲ್ಫಿಯ ಪುನರುತ್ಥಾನಕ್ಕೆ ಬಹುಮಟ್ಟಿಗೆ ಕಾರಣನಾದ. ಇಲಿಯಡ್‍ನಲ್ಲಿ ಕ್ರೂರಿಯೂ ನಿರ್ದಯ ಬಿಲ್ಲುಗಾರನೂ ರೋಗರುಜಿನಗಳ ಹರಡುವಿಕೆಗೆ ಕಾರಣನೂ ಎನಿಸಿಕೊಂಡಿದ್ದ ಅಪಾಲೋನನ್ನು ಪ್ಲುಟಾರ್ಕ್ ತನ್ನ ಗ್ರಂಥಗಳಲ್ಲಿ ಅತ್ಯಂತ ಉದಾರಿ, ಲೋಕಹಿತೈಷಿ, ದಿವ್ಯವಾಣಿಗಳ ಮೂಲಕ ಮಾನವರ ಮಾರ್ಗದರ್ಶಕ, ಅವರ ಪಾವಿತ್ರ್ಯಸಾಧನೆಗೆ ಸಹಾಯಕ ಎಂದು ವರ್ಣಿಸಿದ್ದಾನೆ. ಎಸ್ಕಿಲಸ್, ಪಿಂಡರ್, ಹೆರಾಡೊಟಸ್ ಮುಂತಾದವರು ಸಹ ಡೆಲ್ಫಿಯ ಭಕ್ತರಾಗಿದ್ದುಕೊಂಡು ಅದರ ಪ್ರಭಾವ ಬೆಳೆಯಲು ಕಾರಣರಾದರು. ಬೌದ್ಧಿಕ ಮತ್ತು ಸಾಹಿತ್ಯದ ವಿಷಯಗಳಲ್ಲಿ ಡೆಲ್ಫಿ ಬಹಳ ಪ್ರಭಾವ ಬೀರಿತು. ಅಪಾಲೊ ದೇವಾಲಯದಲ್ಲಿ ಹೋಮರ್, ಹೀಸಿಯಾಡರ ಭಾವಚಿತ್ರಗಳನ್ನು ಕಾದಿರಿಸಲಾಗಿತ್ತು. ಪಿಂಡರನ ಕಬ್ಬಿಣದ ಆಸನವೂ ಅಲ್ಲಿತ್ತು. ದೇವಾಲಯಕ್ಕೆ ಸಲ್ಲಬೇಕಾಗಿದ್ದ ತೆರಿಗೆಗಳಲ್ಲಿ ಪಿಂಡರನಿಗೆ ಪಾಲು ದೊರೆಯುವಂತೆ ದಿವ್ಯವಾಣಿ ಆದೇಶ ನೀಡಿತ್ತು. ಅಪಾಲೋ ಕವಿ-ಕಾವ್ಯಗಳ ಪೋಷಕ ಸಂತನೆಂದು ಪ್ರಸಿದ್ಧನಿದ್ದುದರಿಂದ ಸಾಹಿತ್ಯಶಾಸ್ತ್ರಗಳ ಬೆಳೆವಣಿಗೆಗೆ ಪ್ರೋತ್ಸಾಹ ನೀಡಲಾಯಿತು. ವಿe್ಞÁನದ ಬೆಳೆವಣಿಗೆಗೂ ಅವನು ಕಾರಣನೆಂದು ಗ್ರೀಕರು ಭಾವಿಸಿದ್ದರು.  ಯಾವುದರಲ್ಲೂ ಅತಿರೇಕವಿರಬಾರದು. ನಿನ್ನನ್ನೇ ನೀನು ತಿಳಿದುಕೋ-ಮೊದಲಾದ ಪ್ರಸಿದ್ಧ ಸಾರ್ವತ್ರಿಕ ತತ್ತ್ವಗಳು ಅಪಾಲೋನಿಂದಲೇ ಹುಟ್ಟಿದವು, ಎಂದು ಗ್ರೀಕರು ನಂಬಿದ್ದರು ; ಮತ್ತು ದೇವಾಲಯದ ದ್ವಾರದ ಬಳಿ ಎದ್ದುಕಾಣುವಂತೆ ಅವನ್ನು ಬರೆಸಿದ್ದರು. ಸಾಕ್ರಟೀಸ್ ವಿಶ್ವದಲ್ಲೇ ದೊಡ್ಡ e್ಞÁನಿಯೆಂದು ದಿವ್ಯವಾಣಿಯೊಂದು ನುಡಿದಿತ್ತು. ಪ್ಲೇಟೋ ತನ್ನ ಬರವಣಿಗೆಗಳಲ್ಲಿ ಧಾರ್ಮಿಕ ಮತ್ತು ನೈತಿಕ ವಿಚಾರಗಳಲ್ಲಿ ಡೆಲ್ಫಿಗೆ ಪ್ರಪ್ರಥಮಸ್ಥಾನ ಕೊಟ್ಟಿದ್ದಾನೆ. ಸರ್ವಕಾಲಗಳಲ್ಲೂ ಎಲ್ಲ ಸಂದರ್ಭದಲ್ಲೂ ಪ್ರತಿಯೊಂದು ವಸ್ತುವಿನ ವಿಚಾರದಲ್ಲೂ ಡೆಲ್ಫಿ ಅಸಮಾನವೆಂದು ಅಪಾಲೋ ಹೇಳಿದ್ದಾನೆ.	   (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ